ಇಷ್ಟೇನಾ ?
ಬೆರಳಿಗೆ ತಾಗುತ್ತಾಳೆ ಅವಳು ಕೆಲವು ಸಲ
ಬಾಗುತ್ತಾಳೆ ಸುಮ್ಮನೇ ಹೊರಳುತ್ತಾಳೆ ಕಿಟಕಿಯೆಡೆಗೆ
ಸರಿಸುತ್ತಾಳೆ ಬಟ್ಟೆ, ಒದ್ದೆ ಸೋಪು, ಅರ್ಧ ಮುಗಿದ ಶಾಂಪೂ.
ಹಾಲು ಕಾಯಿಸುತ್ತ ಪಾತ್ರೆ ತೊಳೆಯುತ್ತಾಳೆ.
ಬೇಕಾದಾಗ ಚಾ ಮಾಡಿಕೊಡುತ್ತಾಳೆ ನೆನಪುಗಳ
ಬೆರೆಸದೆ ಬೆವರಿಗೆ ಬೆದರದೆ ; ಬಡಿಸುತ್ತಾಳೆ
ಯಾರೋ ನೀನು ಎನ್ನದೆ ದಾಕ್ಷಿಣ್ಯಕ್ಕೆ ಬೀಳದೆ
ನಾನು ಕಳೆದುಕೊಂಡ ವಿಳಾಸ ಕೇಳದೆ.
ಹಾಸುತ್ತಾಳೆ ಹೊದಿಸುತ್ತಾಳೆ ಬಾಯ್ಲರಿನಲ್ಲಿ ನೀರು
ಕುದಿಸುತ್ತಾಳೆ ಅಂದರೂನೂ ಕಡಿಮೆಯೇ.
ಕರ್ಟನುಗಳಲ್ಲಿ ಧೂಳು ಕಣ ಕೂರದ ಹಾಗೆ
ಕೊಡವುತ್ತಾಳೆ ಹೊಸ ದಿನಗಳಿಗೆ ಧಕ್ಕೆ ತರದೆ.
ಕೆಡದಂತೆ ನಿದ್ದೆ ಉಸುರುತ್ತಾಳೆ ಫೋನಿನಲ್ಲಿ
ಹ್ಯಾಗೆ ಮೆತ್ತಗೆ ನಡೆಯುತ್ತಾಳೆ ನನಗೆ
ಹಾವು ಸರಿದಂತೆಯೂ ಅನ್ನಿಸಲ್ಲ. ಬೋಲ್ಟು
ಜಾರಿಸುವುದೂ ಅಷ್ಟೆ ; ಹೂವು ಬಿದ್ದಂತೆ.
ಕವುಚಿದ ಆಕಾಶವನ್ನು ಸರಿಸಿದರೆ ಬರಿ
ಇಷ್ಟಕ್ಕೇನಾ ಇವಳನ್ನು ಹಚ್ಚಿಕೊಂಡದ್ದು ಎದೆ
ಬಿಚ್ಚಿಕೊಂಡದ್ದು ಇದಕ್ಕೇನಾ ದಿನಾರಾತ್ರಿ ಅತ್ತು
ಕರೆದದ್ದು ಕ್ಷಣಗಟ್ಟಳೆ ಹಾತೊರೆದದ್ದು….
ಎಷ್ಟು ಸಂಜೆಗಟ್ಟೆಗಳಲ್ಲಿ ಕಟ್ಟಿದ್ದೇನೆ ಅವಳ ಜತೆ
ಹೊಚ್ಚ ಹೊಸ ಸೂರ್ಯಾಸ್ತಗಳ ಅನುಭವಿಸಿ
ಎಂಥ ಕೋಡುಗಲ್ಲುಗಳಲ್ಲಿ ಕೈಹಿಡಿದಿದ್ದೆ ಹೇಗೆ
ಅವತ್ತು ರಾತ್ರಿ ಬಿಗಿಯಾಗಿ ಆವರಿಸಿದ್ದೆ….. ವಸ್ತುಶಃ
ನೆನಪುಗಳು ಹೀಗೇ ಇರುತ್ತವೆ ಬಿಡಿ. ಅವಳು ಎಬ್ಬಿಸಿದಾಗ
ಏಳುವುದಷ್ಟೆ ಏಕೈಕ ಮಾರ್ಗ ಬಿಟ್ಟರೆ ಮುಖ್ಯ
ರಸ್ತೆಗೆ ಬಂದು ಕಾಯಬೇಕು ಹೋಗುವುದೆಲ್ಲಿಗೆಂದು
ಆಗಲಾದರೂ ಒಂದಷ್ಟು ನಿರ್ಧರಿಸಬೇಕು.
ದಾರಿಯವರೆಗೆ ಲಗೇಜು ಹಿಡಿದು ಬರುತ್ತಾಳೆ ಮಾರಾಯಾ
ಬರ್ತಾ ಇರು ಎಂದು ವಿನಂತಿಸುತ್ತಾಳೆ.
ಮಗ ಕೈ ಬೀಸುತ್ತಾನೆ. ಗಂಡ ನಸುನಗುತ್ತಾನೆ.
ರಿಕ್ಷಾ ಸಿಗಬಹುದೇ ಎಂದು ವಿಚಾರಿಸುವ
ಹೊತ್ತು ಬಂದೇ ಬಿಡುತ್ತದೆ.
ರಿಕ್ಷಾ ಬಂದೂ ಬಿಡುತ್ತದೆ.
1 Comment
Pingback: ಸಂಬಂಧ : ನನ್ನ ಬದುಕಿನ ಹೈಪರ್ಲಿಂಕ್ಗಳ ಮೊದಲ ಕಥೆ ಓದಿ! | Mitra Maadhyama